ಅಧ್ಯಾಸ
	ಎಂದರೆ ಆರೋಪ; ಒಂದು ವಸ್ತುವಿಗೆ ಅದರಿಂದ ಬೇರೆಯಾದ ವಸ್ತುವಿನ ಸ್ವಭಾವವನ್ನು ವರ್ಗಾಯಿಸಬಹುದು. ಎಲ್ಲ ಬಗೆಯ ಮಿಥ್ಯಾಜ್ಞಾನದಲ್ಲೂ ಇಂಥ ಆರೋಪವಿದೆ ಎಂಬುದನ್ನು ಶಂಕರಾಚಾರ್ಯರು ತಮ್ಮ ವೇದಾಂತಸೂತ್ರಭಾಷ್ಯದ ಪ್ರಸ್ತಾವನೆಯಲ್ಲಿ ತಿಳಿಸಿರುತ್ತಾರೆ. ಹಗ್ಗದ ಬದಲು ಹಾವೆಂದು ಭ್ರಮಿಸಿದಾಗ ಹಗ್ಗದ ಸ್ವಭಾವ ಮುಚ್ಚಿಹೋಗಿ ಹಾವಿನ ಸ್ವಭಾವ ಅದರಲ್ಲಿ ಕಾಣುತ್ತದೆ. ಇತರರಿಂದ ಕೇಳಿ ತಿಳಿದಾಗ, ಅಥವಾ ತಾನೇ ಜಾಗರೂಕನಾಗಿ ಪರೀಕ್ಷಿಸಿ ತಿಳಿದಾಗ, ಹಾವು ಹಗ್ಗದಲ್ಲಿ ಆರೋಪವಾಗಿತ್ತೆಂದು ತಿಳಿದು ಭ್ರಮೆ ನಿವಾರಣೆಯಾಗುತ್ತದೆ. ಆದರೆ ಆತ್ಮದ ವಿಚಾರವಾಗಿ ಬ್ರಹ್ಮದ ವಿಚಾರವಾಗಿ ಜಗತ್ತಿನ ವಿಚಾರವಾಗಿ ನಮಗಿರುವ ಮಿಥ್ಯಾಭಾವನೆ ಅಷ್ಟು ಸುಲಭವಾಗಿ ಪರಿಹಾರವಾಗುವುದಿಲ್ಲ. ಚೇತನರೂಪವಾದ ಆತ್ಮಕ್ಕೆ ಅಚೇತನವಾದ ಶರೀರದ ಧರ್ಮವನ್ನು ದಿನದಿನವೂ ನಮ್ಮ ಜೀವನದುದ್ದಕ್ಕೂ ಆರೋಪಿಸುತ್ತಿದ್ದೇವೆಂಬುದು ನಮಗೆ ಸುಲಭವಾಗಿ ವಿಶದವಾಗುವುದಿಲ್ಲ. ನಾನು ಕುರುಡ, ನಾನು ಕುಂಟ ಎಂದು ನಾವು ಹೇಳಿಕೊಳ್ಳುವುದು ವಾಡಿಕೆಯಲ್ಲವೆ? ಹಾಗೆ ಹೇಳಿಕೊಂಡಾಗ, ತಿಳಿಯುವ ಚೇತನಕ್ಕೆ ಎಂದರೆ ವಿಷಯಿಗೆ, ಅದಕ್ಕೆ ಹೊರತಾದ ಕೇವಲ ವಿಷಯರೂಪವಾದ ಭೌತವಾದ ಕಣ್ಣುಕಾಲುಗಳನ್ನು ಆರೋಪಿಸುತ್ತೇವೆ. ಹಾಗೆಯೇ ಒಳಗೂ ಹೊರಗೂ ಒಂದೇ ಆಗಿರುವ ಬ್ರಹ್ಮಕ್ಕೆ, ಅದಕ್ಕೆ ಹೊರತಾದ ಯಾವುದೂ ಇಲ್ಲದೆ ಎಲ್ಲರನ್ನೂ ಒಳಗೊಂಡಿರುವ ಅಖಂಡವಾದ ಬ್ರಹ್ಮಕ್ಕೆ ಭೇದವನ್ನು ಆರೋಪಿಸಿ ಭ್ರಮೆಗೊಳ್ಳುತ್ತೇವೆ. ಅನಿತ್ಯವಾದ ಜಗತ್ತಿಗೆ ನಿತ್ಯಸ್ವಭಾವವನ್ನು ಆರೋಪಿಸುತ್ತೇವೆ. ಬ್ರಹ್ಮವೊಂದೇ ಸತ್ಯ, ಜಗತ್ತು ಅದಕ್ಕೆ ಸಮಾನವಾದ ನಿತ್ಯಸತ್ಯವಲ್ಲ. ಬ್ರಹ್ಮವೊಂದೇ ನಿಜವಾಗಿ ಆತ್ಮರೂಪವಾದದ್ದು, ಅದು ವಿಷಯಿ, ವಿಷಯರೂಪದ್ದಲ್ಲ. ಜಗತ್ತು ಪ್ರತ್ಯೇಕವಾದ ಜೀವಿಗಳು ಬ್ರಹ್ಮದಂತೆ ಸತ್ಯವೆಂದು ಬಗೆಯುವುದು ಮಿಥ್ಯಾಜ್ಞಾನ. ಆ ಮಿಥ್ಯಾಜ್ಞಾನ ಆರೋಪ ಅಥವಾ ಅಭ್ಯಾಸದ ಮೂಲಕ. ಇದು ಶಂಕರಾಚಾರ್ಯರ ಸಿದ್ಧಾಂತ.				 (ನೋಡಿ- ಅದ್ವೈತ)	
						
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ